ಬೆಂಗಳೂರು;ನಿನ್ನೆ ಸುರಿದ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ನಡೆದಿವೆ. ಮಲ್ಲೇಶ್ವರಂನ ಚಿನ್ನಾಭರಣ ಮಳಿಗೆಗೆ ಮಳೆ ನೀರು ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ.
ಚಿನ್ನಾಭರಣ ಮಳಿಗೆಗೆ ಮಳೆಯ ನೀರು ನುಗ್ಗಿ ಸುಮಾರು ಎರಡುವರೆ ಕೋಟಿ ರೂ.ನಷ್ಟವಾಗಿದೆ.
ಮಾಧ್ಯಮವೊಂದು ವರದಿ ಮಾಡಿದ್ದು, ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ನಿಹಾನ್ ಆಭರಣ ಮಳಿಗೆಗೆ ಮಳೆ ನೀರು ನುಗ್ಗಿದ್ದು, ಈ ವೇಳೆ ಮಳಿಗೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಮಳೆ ನೀರು ಮಳಿಗೆಗೆ ನುಗ್ಗಿದ ವೇಳೆ ಸಿಬ್ಬಂದಿಗಳು ಇದ್ದರಾದರೂ ಆಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗದಂತೆ ತಡೆಯಲೆತ್ನಿಸಿದ್ದಾರೆ.
ಚಿನ್ನಾಭರಣ ಮಳಿಗೆಗೆ ಮಳೆ ನೀರು ನುಗ್ಗಿ ಎರಡೂವರೆ ಕೋಟಿ ಲಾಸ್ ಆಗಿದ್ದು ಶಾಪ್ ಮಾಲೀಕಿ ಕಣ್ಣೀರಿಡುತ್ತಿದ್ದಾರೆ.
ಬೆಂಗಳೂರಿನಲ್ಲಿ ರಣ ಭೀಕರ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ. ಹಲವೆಡೆ ಮರ, ಲೈಟ್ ಕಂಬಗಳು ಧರೆಗುರುಳಿವೆ. ಮನೆಯಲ್ಲಿದ್ದ ಸಾಮಾಗ್ರಿಗಳೂ ನೀರುಪಾಲಾಗಿದ್ದು, ಕಾರು, ಬೈಕ್ಗಳೆಲ್ಲ ನೀರಿನಲ್ಲಿಯೇ ನಿಂತಿವೆ. ಭಾರೀ ಅನಾಹುತವೇ ಸಂಭವಿಸಿದೆ.