ಬೆಂಗಳೂರು:ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗಲಾಟೆಗೂ ತನಗೂ ಸಂಬಂಧವಿಲ್ಲದಿದ್ದರೂ ಚಾಕು ಇರಿದಿದ್ದ ಆರೋಪಿ ಅನಿಲ್ ಹಾಗೂ ಶೃಂಗ ಎಂಬಾತನನ್ನು ಬಾಗಲೂರು ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏಪ್ರಿಲ್ 28ರ ರಾತ್ರಿ ಕಾಲೇಜು ಫೆಸ್ಟಿವಲ್ ಸಂದರ್ಭದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಭರತೇಶ್ ಸ್ನೇಹಿತನ ಅತ್ತೆ ಮಗಳ ಮೇಲೆ ಶರತ್ ಎಂಬಾತ ಕ್ರಿಕೆಟ್ ಬಾಲ್ ಎಸೆದಿದ್ದ. ಇದೇ ವಿಚಾರವಾಗಿ ಶರತ್ ಹಾಗೂ ಆತನ ಸ್ನೇಹಿತ ಭಾಸ್ಕರ್ ಜೆಟ್ಟಿ ಜೊತೆ ಭರತೇಶ್ ಗುಂಪು ಗಲಾಟೆ ನಡೆಸಿತ್ತು. ಈ ವೇಳೆ ಏಕಾಏಕಿ ಮಧ್ಯ ಪ್ರವೇಶಿಸಿದ್ದ ಆರೋಪಿ ಅನಿಲ್ ಏಕಾಏಕಿ ಭಾಸ್ಕರ್ ಜೆಟ್ಟಿಯ ಎದೆಗೆ ಚಾಕು ವಿನಿಂದ ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಭಾಸ್ಕರ್ ಜೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಭರತೇಶ್ನನ್ನ ಬಂಧಿಸಿದ್ದರು. ಕೃತ್ಯದ ಬಳಿಕ ಕಾರಿನಲ್ಲಿ ಮೂಡಿಗೆರೆಗೆ ಪರಾರಿಯಾಗಿದ್ದ ಅನಿಲ್ ಹಾಗೂ ಆತನ ಜೊತೆಗಿದ್ದ ಶೃಂಗ ಮೂಡಿಗೆರೆಯ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ಆತನ ಸ್ನೇಹಿತನ ಫೋನ್ ಕರೆ ಆಧಾರದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.