ಯುವಕನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ
ಬೆಂಗಳೂರು; ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಮಾಡಿರುವ ಘಟನೆ ಬೆಂಗಳೂರಿನ ಕಸವನಹಳ್ಳಿ ಮುಖ್ಯರಸ್ತೆಯ ಹರಳೂರು ಬಳಿ ನಡೆದಿದೆ.
ಡೇವಿಡ್(20) ಕೊಲೆಯಾದ ಯುವಕ.ಸ್ನೇಹಿತರೊಂದಿಗೆ ಬಾರ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕ ಡೇವಿಡ್ ಹಾಗೂ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.
ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ಡೇವಿಡ್ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸ್ನೇಹಿತರು ಪರಾರಿಯಾಗಿದ್ದಾರೆ.ತೀವ್ರ ರಕ್ತಸ್ರಾವದಿಂದ ಡೇವಿಡ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆ ಆರೋಪಿಗಳು ಹಾಗೂ ಮೃತ ಡೇವಿಡ್ ನೇಪಾಳದ ನಿವಾಸಿಗಳಾಗಿದ್ದು ಅಕ್ಕ-ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.
ನೇಪಾಳ ಮೂಲದವನಾಗಿದ್ದ ಡೇವಿಡ್ ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.