ಶಿವಮೊಗ್ಗ:2017ರಲ್ಲಿ ನಡೆದ ರೌಡಿಶೀಟರ್ ಅಯಾತ್ ಅಲಿಯಾಸ್ ಬಚ್ಚಾ(19) ಎಂಬಾತನಿಗೆ ಕೊಲೆ ಮಾಡಿದ ನಾಲ್ವರು ಅಪರಾಧಿಗಳಿಗೆ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿದೆ.
2017ರ ಫೆಬ್ರವರಿ 8ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಅಣ್ಣನಗರದ ಮಾತೃಶ್ರೀ ಸ್ಟುಡಿಯೋ ಬಳಿ ನಿಂತಿದ್ದ ಬಚ್ಚಾನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ಕೀಲಿ ಇಮ್ರಾನ್, ನೋಟು ಕುರ್ರಂ, ಇರ್ಪಾನ್, ಅಡ್ಡು, ಅಸಾದುಲ್ಲಾ, ಶಾರೂಕ್, ಅರ್ಬಾಜ್, ಶಾದಾಬ್ ಹಾಗೂ ಆಶುರವರು ಸೇರಿ ತನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಬಚ್ಚಾನ ತಾಯಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಗುರುರಾಜ ಕೆ.ಟಿ ಅವರು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ದ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಶಿವಮೊಗ್ಗ ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಗಳಾದ ಅರ್ಬಾಜ್ (19), ಶಾರೂಕ್ ಖಾನ್ (19), ಶಾದಾಬ್ (19), ಅಲ್ಯಾಜ್ ಆಶು(19) ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕೆ.ಮಾನು ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ ದಂಡ ವಿಧಿಸಿದ್ದಾರೆ.