ಮುಂಬೈ-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಾಲ್ವರ ಹಂತಕ RPF ಪೇದೆ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆಟೋ ಡ್ರೈವರ್ ವಹೀದ್ ಖಾನ್

ಮುಂಬೈ-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಿರಿಯ ಅಧಿಕಾರಿ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರನ್ನು ಹತ್ಯೆ ಮಾಡಿದ್ದ ಆರ್ ಪಿಎಫ್ ಪೇದೆ ಚೇತನ್ ಸಿಂಗ್ ಚೌದರಿಯ ಮತ್ತೊಂದು ಕುಕೃತ್ಯ ಬಯಲಾಗಿದೆ.

ಆಟೋ ಚಾಲಕನೋರ್ವ ತನಗೆ ಪೇದೆ ಚೇತನ್ ಸಿಂಗ್ ಹಲ್ಲೆ ನಡೆಸುತ್ತಿದ್ದ, ಕಿರುಕುಳ ನೀಡುತ್ತಿದ್ದ ಎನ್ನುವುದನ್ನು ಬಹಿರಂಗ ಪಡಿಸಿದ್ದು, ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಿರುವ ಬಗ್ಗೆಯೂ ತಿಳಿಸಿದ್ದಾರೆ.

ಉಜ್ಜೈನಿ ನಿವಾಸಿ ವಹೀದ್ ಖಾನ್(45) ಎಂಬ ಆಟೋ ಚಾಲಕ ನನ್ನ ಮೇಲೆ 2017ರಲ್ಲಿ ಚೇತನ್ ಸಿಂಗ್ ಚೌದರಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದಾರೆ.

ಚೇತನ್ ಸಿಂಗ್ ನನಗೆ ಕಿರುಕುಳ ನೀಡುತ್ತಿದ್ದರು. ಒಂದು ದಿನ ನನ್ನನ್ನು ಬಂಧಿಸಿ ನನ್ನನ್ನು ಭಯೋತ್ಪಾದಕ ಎಂದು ಕರೆದರು. ಇದರಿಂದಾಗಿ ನನ್ನ ಕುಟುಂಬ ಅವನಿಗೆ ಹೆದರುತ್ತಿತ್ತು.ನನ್ನನ್ನು ಚೌದರಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾನೆ ಎಂಬ ಭಯ ಅವರಿಗೆ ಇತ್ತು. ನನಗೆ ಜೀವ ಭಯ ಇದ್ದ ಕಾರಣ ಆತನ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೆ ಎಂದು ಖಾನ್ ಹೇಳಿದ್ದಾರೆ.

2017ರಲ್ಲಿ ಒಂದು ದಿನ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂಎಲ್ ಮೀನಾ ಎಂಬವರು ಕನ್ನಡಕ ಬಿಟ್ಟು ಬಂದ ಕಾರಣ ಖಾನ್ ಅವರಿಗೆ ಕರೆ ಮಾಡಿ ಕನ್ನಡಕ ತರುವಂತೆ ಕೇಳಿದ್ದರು. ಅದರಂತೆ ಖಾನ್ ಕನ್ನಡಕವನ್ನು ನೀಡಲು ಹೋದಾಗ, ಚೌಧರಿ ಅವರನ್ನು ಹಿಡಿದು ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ಹೋಗಲಿಲ್ಲ ಎಂಬ ಆರೋಪದಲ್ಲಿ 270 ರೂಪಾಯಿ ದಂಡ ವಿಧಿಸಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.

ಮತ್ತೊಂದು ದಿನ ಚೌಧರಿ ಅವರು ಮತ್ತೆ ರೈಲ್ವೆ ನಿಲ್ದಾಣದ ಸರಕುಗಳ ಗೋದಾಮಿನ ಬಳಿ ಖಾನ್ ಅವರನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಬ್-ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ಯಾದವ್, ಒಂದು ದಿನ ಪೇದೆ ಚೌದರಿ, ಖಾನ್ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಚೌದರಿ ಯುನಿಫಾರ್ಮ್ ನಲ್ಲಿ ಇರಲಿಲ್ಲ. ಒಂದು ವೇಳೆ ಖಾನ್ ಕೆಟ್ಟದಾಗಿ ವರ್ತಿಸಿದರೆ ಆತನ ಮೆಲೆ ಕಾನೂನಿನ ಪ್ರಕಾರ ದೂರು ನೀಡಬೇಕೆಂದು ಸೂಚಿಸಿದ್ದೆ ಎಂದು ಹೇಳಿದ್ದಾರೆ.

ಇದಲ್ಲದೆ ಕರ್ತವ್ಯದ ಸಮಯದಲ್ಲಿ ಯುನಿಫಾರ್ಮ್ ಧರಿಸಬೇಕು ಮತ್ತು ಯಾರ ಜೊತೆಯು ಕಾನೂನು ಬಾಹಿರವಾಗಿ ವರ್ತಿಸಬಾರದು ಎಂದು ಹೇಳಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್