ಅತ್ತಿಬೆಲೆ ಪಟಾಕಿ ಅಂಗಡಿ ದುರಂತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ

ಆನೇಕಲ್:‌ ಅತ್ತಿಬೆಲೆ ಬಳಿ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟಾಕಿಗಳ ಸ್ಫೋಟ ನಡೆಯುತ್ತಿದ್ದ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ದೌಡಾಯಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಅಗ್ನಿ ಅನಾಹುತದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಾಜಿ ಕ್ರಾಕರ್ಸ್ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕ್ಯಾಂಟರ್‌ನಲ್ಲಿ ಪಟಾಕಿ ಅನ್ ಲೋಡ್ ಮಾಡುವ ವೇಳೆ ಬೆಂಕಿ ಅನಾಹುತ ಸಂಭವಿಸಿದೆ.

ಘಟನೆ ಬೆನ್ನಲ್ಲೇ ಹೊಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಯ್ತು. ಅತ್ತಿಬೆಲೆ ಟೋಲ್ ಬಳಿ ಟ್ರಾಫಿಕ್ ಜಾಮ್‌ನಲ್ಲಿ ಅಗ್ನಿಶಾಮಕ ದಳ ವಾಹನ ಕೂಡ ಸಿಲುಕಿತ್ತು.

ಸುಮಾರು ಇಪ್ಪತ್ತು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರ ರೋದಬ ಮುಗಿಲು ಮುಟ್ಟಿದೆ. ತಮ್ಮವರು ಕಾಣುತ್ತಿಲ್ಲ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

ಮೃತರು ಎಲ್ಲರೂ ತಮಿಳುನಾಡು ಕಾರ್ಮಿಕರು ಎಂಬ ಮಾಹಿತಿ ಇದ್ದು, ಮೃತರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಘಟನೆ ಹೇಗಾಯಿತು, ಏನೆಲ್ಲಾ ಲೋಪ ಇದೆ ಎಂಬುವುದರ ಬಗ್ಗೆ ತನಿಖೆ ಮಾಡಲಾಗುತ್ತದೆ.ಗೋಡೌನ್‌ಗೆ ಪರ್ಮಿಷನ್ ಇರಲಿಲ್ಲ.ಅಂಗಡಿಗೆ ಪರ್ಮಿಷನ್ ಇತ್ತು ಎಂಬ ಮಾಹಿತಿ ಇದೆ. ಸದ್ಯ ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ಸ್ಥಳಕ್ಕೆ ಬೇಟಿ‌ ನೀಡಿದ ಡಿಸಿಎಂ ಡಿಕೆಶಿವಕುಮಾರ್ ಹೇಳಿದರು.

ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.

ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಸಂಗ್ರಹ ಮಾಡಿಕೊಳ್ಳುವ ವೇಳೆ ಈ ದುರಂತ ನಡೆದಿದ್ದು, ದುರಂತಕ್ಕೆ ನಿಖರ ಕಾರಣ ಏನು ಎನ್ನುವುದು ತಿಳಿದು ಬರಬೇಕಿದೆ.

ಟಾಪ್ ನ್ಯೂಸ್