ಬೆಂಗಳೂರು;ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಅಶ್ವತ್ಥ್ ನಾರಾಯಣ ನೀಡಿದ ಹೇಳಿಕೆ ವಿರುದ್ಧ ಈಗ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ಭರದಲ್ಲಿ, ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯರವರು ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ, ಟಿಪ್ಪು ಬೇಕಾ? ಎಂಬುದನ್ನು ನೀವೇ ತೀರ್ಮಾನಿಸಿ. ಹುರಿಗೌಡ ನಂಜೇಗೌಡ ಅವರು ಟಿಪ್ಪುವಿಗೆ ಏನು ಮಾಡಿದ್ರು ಅನ್ನೋದು ನಿಮಗೆ ಗೊತ್ತಿದೆ. ಅದೇ ರೀತಿ ಇವರನ್ನು ಹೊಡೆದು ಹಾಕಬೇಕು. ರಾಜ್ಯದಲ್ಲಿ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ.ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು
ಫೆಬ್ರವರಿ 16 ರಂದು ಅಶ್ವತ್ಥ್ ನಾರಾಯಣ ಅವರು, ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದು, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು ಮೈಸೂರಿನ ದೇವರಾಜ ಠಾಣೆಗೆ ದೂರು ನೀಡಿದ್ದರು.ಅಂದಿನಿಂದ ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇಂದು ಠಾಣೆಗೆ ತೆರಳಿ ಮತ್ತೆ ಲಕ್ಷ್ಮಣ ದೂರು ಸಲ್ಲಿಸಿದ್ದು, ಅವರು ನೀಡಿದ ದೂರಿನ ಅನ್ವಯ ಅಶ್ವತ್ಥ್ ನಾರಾಯಣ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.