ನರೇಂದ್ರನಾಯಕ್ ಸವಾಲು ಸ್ವೀಕರಿಸಿ ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳಿದ ಎಲ್ಲಾ ಜ್ಯೋತಿಷ್ಯರಿಗೆ ಸೋಲು!
ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳುವವರಿಗೆ ಸವಾಲು ಹಾಕಿದ್ದರು.
ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಜ್ಯೋತಿಷ್ಯರು ಕೂಡ ತಪ್ಪಾದ ಉತ್ತರ ಹೇಳಿ ಸೋತಿದ್ದಾರೆ. ಇದರಿಂದ ಪತ್ರಿಕಾ ಗೋಷ್ಟಿಯಲ್ಲೇ ಲಕೋಟೆ ತೆರೆದು ಒಂದು ಲಕ್ಷ ರೂ. ಬಹುಮಾನ ತನ್ನಲ್ಲೇ ಇರಿಸಿಕೊಂಡಿದ್ದಾರೆ.
ನರೇಂದ್ರ ನಾಯಕ್ ರವರು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ ನಲ್ಲಿ 10 ದಿರ್ಹಮ್, 4ನೆಯ ಕವರ್ ನಲ್ಲಿ ನೇಪಾಳದ 20 ರೂ., 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್, 6ನೆಯದ್ದರಲ್ಲಿ Astrology Flopped miserably Once again ಎಂದು ಬರೆಯಲಾಗಿತ್ತು. 7ನೆಯದ್ದರಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.
ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆ ನಾಲ್ವರು ತಪ್ಪಾಗಿ ಉತ್ತರ ನೀಡಿದ್ದಾರೆ. ಓರ್ವರು ಆರು ಖಾಲಿ ಲಕೋಟೆಗಳು ಎಂದು, ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ.