1 ಸಾವಿರ ಖಾಸಗಿ ಮದ್ರಸಾ ಮುಚ್ಚಲು ಮುಂದಾದ ಅಸ್ಸಾಂ ಸರಕಾರ

ರಾಜ್ಯದ ಒಂದು ಸಾವಿರ ಖಾಸಗಿ ಮದ್ರಸಾಗಳನ್ನು ಸಂಪೂರ್ಣವಾಗಿ ಮುಚ್ಚಲು ಅಸ್ಸಾಂನ ಬಿಜೆಪಿ ಸರ್ಕಾರ ಮುಂದಾಗಿದ್ದು, ಹೊಸ ವರ್ಷದ ಮೊದಲ ದಿನದಂದು ಈ ಕುರಿತು ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿಕೆ ನೀಡಿದ್ದಾರೆ.

ಖಾಸಗಿ ಮದ್ರಸಾಗಳನ್ನು ಸಾಂವಿಧಾನಿಕವಾಗಿ ರಕ್ಷಿಸಲಾಗಿದೆ. ಆದರೆ, ರಾಜ್ಯ ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ ಎಂದು ಸಿಎಂ ಹೇಳಿದ್ದಾರೆ.

2024ರ ಅಂತ್ಯದ ವೇಳೆಗೆ ಅಸ್ಸಾಮಿ ಮುಸ್ಲಿಮರು ಎಂದೂ ಕರೆಯಲ್ಪಡುವ ಸ್ಥಳೀಯ ಮುಸ್ಲಿಮರ ವಿಶೇಷ ಗಣತಿಯನ್ನು ನಡೆಸಲು ಸರ್ಕಾರದ ಯೋಜನೆ ರೂಪಿಸಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ. ಈ ಜನಗಣತಿಯು ಗ್ರಾಮ, ನಗರ ಮತ್ತು ಪುರಸಭೆ ಪ್ರದೇಶಗಳಲ್ಲಿರುವ ಅಸ್ಸಾಮಿ ಮುಸ್ಲಿಂ ಜನಸಂಖ್ಯೆಯೊಳಗಿನ ವಿಭಿನ್ನ ಸಮುದಾಯಗಳನ್ನು ಗುರುತಿಸುವ ಮತ್ತು ದಾಖಲಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಈ ಹಿಂದೆ ಎರಡು ರೀತಿಯ ಮದ್ರಸಾ ವ್ಯವಸ್ಥೆಗಳಿತ್ತು. ಒಂದು ಸರ್ಕಾರಿ ಮತ್ತೊಂದು ಖಾಸಗಿ. ಸರ್ಕಾರಿ ಮದ್ರಸಾಗಳಿಗೆ ಪಠ್ಯ,ಪರೀಕ್ಷೆ ಎಲ್ಲವನ್ನೂ ಸರ್ಕಾರ ಹೇಳಿದಂತೆ ರೂಪಿಸಲಾಗುತ್ತಿತ್ತು.ಇತ್ತೀಚೆಗೆ ಎಲ್ಲಾ ಸರ್ಕಾರಿ ಮದ್ರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಸರ್ಕಾರ ಬದಲಿಸಿದೆ.ಮದ್ರಸಾಗಳಲ್ಲಿ ಮಕ್ಕಳಿಗೆ ಲೌಕಿಕ ಶಿಕ್ಷಣ ಸಿಗುತ್ತಿಲ್ಲ ಎಂಬ ಕಾರಣವನ್ನು ಸರ್ಕಾರ ಹೇಳಿದೆ.

ಖಾಸಗಿ ಮದ್ರಸಾಗಳನ್ನು ಮುಚ್ಚುವುದು ಅಸ್ಸಾಂನ ಶೈಕ್ಷಣಿಕ ಚೌಕಟ್ಟನ್ನು ಮರುರೂಪಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಸರ್ಕಾರ ಮದ್ರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲು ಕೆಲಸ ಮಾಡುತ್ತಿದೆ. ಈ ಉಪಕ್ರಮವು ಶಿಕ್ಷಣವನ್ನು ಆಧುನೀಕರಿಸುವ ರಾಜ್ಯದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಎಲ್ಲಾ ಸಂಸ್ಥೆಗಳು, ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಅನುಕೂಲಕರವಾದ ಮೂಲಭೂತ ಸೌಕರ್ಯ ಮತ್ತು ಕಲಿಕೆಯ ವಾತಾವರಣವನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.

ಟಾಪ್ ನ್ಯೂಸ್