ಪುತ್ತೂರು:ಬಿಜೆಪಿ ನಾಯಕರ ಬ್ಯಾನರ್ ಗೆ ಶ್ರದ್ಧಾಂಜಲಿ ಕೋರಿ ಹಾಕಿದ್ದ ಬ್ಯಾನರ್ ವಿವಾದ, ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ಬೆನ್ನಲ್ಲೇ ಪುತ್ತೂರು ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದಾರೆ.
ಡಿವೈಎಸ್‌ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಹಲ್ಲೆಗೆ ಕಾಂಗ್ರೆಸ್ಸಿನವರೇ ಕಾರಣ ಎಂದ ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, ನನ್ನ ಕ್ಷೇತ್ರದಲ್ಲಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಕರಣದ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಎಫ್‌ಐಆರ್ ದಾಖಲಿಸಿ ಅಮಾನತು ಮಾಡುವಂತೆ ಸೂಚಿಸಿದ್ದೆ ಅದರಂತೆ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಕ್ರಮ ಜರುಗಿಸಲಾಗಿದೆ ಎಂದರು.
ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರ ಕಾಲ್ ಲಿಸ್ಟ್ ತೆಗೆದು ಅದನ್ನು ಎರಡು ದಿನದೊಳಗೆ ಬಹಿರಂಗಪಡಿಸುವೆ ಆವಾಗ ಪುತ್ತೂರಿನ ಜನತೆಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಇನ್ನು ಶಾಸಕ ಹರೀಶ್‌ಪೂಂಜ ಪುತ್ತೂರಿಗೆ ಬಂದು ಈ ವಿಚಾರದಲ್ಲಿ ಮತನಾಡುವ ಅಗತ್ಯವಿಲ್ಲ.ನನ್ನ ಕ್ಷೇತ್ರದಲ್ಲಿ ಆಗಿರುವ ಘಟನೆಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ ಎಂದು ಇದೇ ವೇಳೆ ಅಶೋಕ್ ರೈ ಹೇಳಿದ್ದಾರೆ.