ಹುತಾತ್ಮ ಎನ್ನುವುದು ನಾಮಪದ. ಇದರ ಕ್ರಿಯಾತ್ಮಕ ಅರ್ಥ ಧರ್ಮಕ್ಕಾಗಿ ಬಲಿಯಾಗು. ಧರ್ಮ ಎಂದರೆ ಆಯಾ ವ್ಯಕ್ತಿಯ ಕ್ರಿಯಾತ್ಮಕ ನಿಷ್ಠೆ, ಗುಣಸ್ವಭಾವ. ಅಂದರೆ ಕ್ಷತ್ರಿಯನ ಧರ್ಮ ಹೋರಾಡುವುದು, ವ್ಯಾಪಾರಿಯ ಧರ್ಮ ಮೋಸವಿಲ್ಲದೆ ವ್ಯಾಪಾರ ಮಾಡುವುದು. ಅದರಂತೆ ರೈತನ ಧರ್ಮ ಫಲವತ್ತಾದ ಬೆಳೆಗಳನ್ನು ಬೆಳೆಯುವುದು. ಜನರಿಗೆ ತಲುಪುವಂತಹ ಕೆಲಸವನ್ನು ಮಾಡುವುದು, ಹಾಗಾದ್ರೆ ತನ್ನ ಕಾಯಕ ಧರ್ಮಕ್ಕೆ ಅಡ್ಡಿಪಡಿಸಿದಾಗ ಅದರ ವಿರುದ್ಧ ಹೋರಾಡುವುದು ಧರ್ಮವಲ್ಲವೇ? ಧರ್ಮಕ್ಕಾಗಿ ಮಡಿದವನು ಹುತಾತ್ಮನಲ್ಲವೇ?
ಭಾರತೀಯ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಭಾರತದಾದ್ಯಂತ ಲಕ್ಷಾಂತರ ರೈತರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಸಿಂಗು, ಟಿಕ್ರಿ, ಗಾಜಿಪುರ ಮುಂತಾದ ಸ್ಥಳಗಳು ದೈತ್ಯ ಪ್ರತಿಭಟನಾ ತಾಣಗಳಾಗಿ ಮಾರ್ಪಟ್ಟಿವೆ. ಗುಜರಾತ್, ಉತ್ತರಪ್ರದೇಶ, ಪಂಜಾಬ್, ಬಿಹಾರದಲ್ಲಿ ಪ್ರತಿಭಟನೆಯ ಕಿಚ್ಚು ಕಾವೇರಿದೆ. ಕನಿಷ್ಠ 200 ರೈತರು ಕೊರೆವ ಚಳಿಯ ಮಧ್ಯೆ ಹೋರಾಡುತ್ತಾ ಮೃತಪಟ್ಟಿದ್ದಾರೆ. ಅವರಲ್ಲಿ ಉತ್ತರ ಪ್ರದೇಶದ ಪಿಲಿಭಿತ್‌ನ ರೈತ ಬಲ್ವಿಂದರ್ ಸಿಂಗ್ ಕೂಡ ಒಬ್ಬರು.
32 ವರ್ಷದ ಬಲ್ವಿಂದರ್ ಸಿಂಗ್ ರೈತ ಪ್ರತಿಭಟನಾ ಸ್ಥಳದಿಂದ ಕಾಣೆಯಾದ ಬಳಿಕ ದೆಹಲಿ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಫೆಬ್ರವರಿ 1 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಭೋಪತ್‌ಪುರದ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆಯ ವೇಳೆ ಅವರ ಕುಟುಂಬಸ್ಥರು ಅವರ ಮೃತದೇಹಕ್ಕೆ ರಾಷ್ಟ್ರಧ್ವಜವನ್ನು ಸುತ್ತಿ ಅಂತ್ಯಕ್ರಿಯೆಯನ್ನು ನಡೆಸಿದ್ದರು. ಇದು ಯೋಗಿ ಸರಕಾರದ ಕಣ್ಣು ಕೆಂಪಾಗಿಸಿದೆ. ಮೊದಲು ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ಪಾಕಿಸ್ತಾನಿಗಳು ಎಂದೆಲ್ಲಾ ಹೇಳಿಕೆ ಕೊಡುತ್ತಿದ್ದ ಬಿಜೆಪಿಗರಿಗೆ ರಾಷ್ಟ್ರಧ್ವಜಕ್ಕೆ ಅಪಮಾನ ಎಂಬಂತಹ ಆರೋಪ ನೆಪ ಮಾತ್ರ ಎಂಬಂತೆ ಕಾಣಿಸುತ್ತಿದೆ.
ರೈತ ನಮ್ಮ ದೇಶದ ಬೆನ್ನುಲುಬು, ರೈತ ಬೆಳೆದ ಬೆಳೆಗಳನ್ನು ತಿಂದು ಜನರು ಬದುಕುತ್ತಿದ್ದಾರೆ. ಈತ ಗಡಿ ಕಾಯುವ ಸೈನಿಕನಷ್ಠೇ ಅಭಿನಂದನಾರ್ಹ. ನಾವು ಕೊರೊನಾ ಸಂದರ್ಭದಲ್ಲಿ ವೈದ್ಯರನ್ನು ಯೋಧರಂತೆ ಕಂಡಿದ್ದೇವೆ. ಆಶಾ ಕಾರ್ಯಕರ್ತರನ್ನು ಯೋಧರಂತೆ ಕಂಡಿದ್ದೇವೆ. ಅದರಂತೆ ಹಸಿವನ್ನು ತಣಿಸಿದ ರೈತ ಕೂಡ ಸಾರ್ವಕಾಲಿಕ ಯೋಧ. ಆತ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಅಲ್ಪ ಸ್ವಲ್ಪ ಹಣಕ್ಕೆ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಕೊಟ್ಟು ಜನರಿಗೆ ಹಂಚಿಕೆ ಮಾಡುತ್ತಾನೆ. ಅದನ್ನು ತಿಂದು ಜನರು ಬದುಕುತ್ತಾರೆ. ಬಲಿಷ್ಠವಾಗುತ್ತಾರೆ. ನಾವು ಆರೋಗ್ಯವೇ ಭಾಗ್ಯ ಎನ್ನುತ್ತೇವೆ. ನಮ್ಮ ಉತ್ತಮ ಆರೋಗ್ಯಕ್ಕೆ ಹಣ್ಣು, ತರಕಾರಿಗಳನ್ನು, ಧಾನ್ಯಗಳನ್ನು ಯಾರು ಪೂರೈಸುತ್ತಾರೆ ರೈತರಲ್ಲವೇ?
ಬಾಲ್ವಿಂದರ್ ಅವರ ಪತ್ನಿ ಮತ್ತು ಸಹೋದರನಿಗೆ “ರಾಷ್ಟ್ರಧ್ವಜವನ್ನು ಅವಮಾನಿಸಿದ” ಆರೋಪ ಹೊರಿಸಲಾಗಿದೆ. ಜಸ್ವೀರ್ ಕೌರ್ ಮತ್ತು ಗುರ್ವಿಂದರ್ ಸಿಂಗ್ ವಿರುದ್ಧ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಗ್ರಾಮಸ್ಥರು ಬಲ್ವಿಂದರ್ ಅವರನ್ನು ಕಾಯ್ದೆ ವಿರುದ್ಧ ಹೋರಾಡಿದ ಹುತಾತ್ಮರೆಂದು ಬಿಂಬಿಸಿದ್ದಾರೆ. ಒಂದು ದೇಶ ಎಂದ ಮೇಲೆ ಆ ದೇಶದ ರೈತ, ಕಾರ್ಮಿಕ, ವ್ಯಾಪಾರಿಗಳು, ಉದ್ಯಮಿಗಳು ಸೇರಿ ಎಲ್ಲಾ ವರ್ಗದ ಜನರು ಕೂಡ ಸೇರುತ್ತಾರೆ. ಒಂದು ವರ್ಗದ ಹಿತಾಶಕ್ತಿಗೆ ಧಕ್ಕೆ ಯಾದರೆ ಅದು ದೇಶದ ಹಿತಾಶಕ್ತಿಗೆ ಧಕ್ಕೆಯಾದಂತೆ. ಈ ವೇಳೆ ಪ್ರತಿಭಟನೆ ಮಾಡಿ ದೇಶದ ಹಿತಾಶಕ್ತಿಯನ್ನು ಕಾಪಾಡುವುದು ಸಂವಿಧಾನಾತ್ಮಕ ಹಕ್ಕು. ಈ ವೇಳೆ ಪ್ರತಿಭಟನೆಯಲ್ಲಿ ಮೃತಪಟ್ಟವರು ಹುತಾತ್ಮ,ರೆ, ಯಾಕೆಂದರೆ ಅವರು ದೇಶಕ್ಕಾಗಿ ಮೃತಪಟ್ಟವರು.ದೇಶದ ಮುಂದಿನ ಪೀಳಿಗೆಗೆ ನ್ಯಾಯಕ್ಕಾಗಿ ಹೋರಾಟ ಮಾಡಿ ಮೃತಪಟ್ಟವರು ಅಲ್ವ? ಅವರಿಗೆ ಗೌರವ ಕೊಡುವುದು ಅಪರಾಧವೇ? ತ್ರಿವರ್ಣಧ್ವಜದಲ್ಲಿ ಅವರನ್ನು ಸುತ್ತುವುದು ತ್ರಿವರ್ಣಧ್ವಜಕ್ಕೆ ಮಾಡಿದ ಅಪಮಾನವೇ?
ನಾವು 2016ರ ಅಕ್ಟೋಬರ್ ನಲ್ಲಿ ನಡೆದ ಘಟನೆಯೊಂದನ್ನು ಗಮನಿಸಬೇಕು. ದಾದ್ರಿಯಲ್ಲಿ ಅಖ್ಲಾಕ್ ನನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ರವಿನ್ ಸಿಸೋಡಿಯಾ, ಮೃತಪಟ್ಟಾಗ ಉತ್ತರ ಪ್ರದೇಶದ ಬಿಸಾಡ ನಿವಾಸಿಗಳು ಅವನ ದೇಹವನ್ನು ರಾಷ್ಟ್ರಧ್ವಜದಲ್ಲಿ ಸುತ್ತಿಕೊಂಡರು. ಅಷ್ಟೇ ಅಲ್ಲ, ಅಂತ್ಯಕ್ರಿಯೆಯಲ್ಲಿ ಭಾರತೀಯ ಜನತಾ ಪಕ್ಷದ ಮಂತ್ರಿಗಳು ಮತ್ತು ಇತರ ಬಲಪಂಥೀಯ ಮುಖಂಡರು ಉಪಸ್ಥಿತರಿದ್ದರು ಮತ್ತು ತ್ರಿವರ್ಣದಲ್ಲಿ ಕಟ್ಟಿದ ದೇಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದು ಅಪರಾಧ ಅಲ್ವಾ? ಈ ಬಗ್ಗೆ ಪೊಲೀಸರಾಗಲೀ , ಯುಪಿ ಸರಕಾರವಾಗಲೀ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಆದರೆ ಭೋಪತ್ ಪುರ ರೈತನ ಕಟುಂಬಸ್ಥರ ವಿರುದ್ಧ ಸೆಕ್ಸನ್ 2(ಡಿ) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಹೋರಾಟದಲ್ಲಿ ಮಡಿದ ರೈತನ ಕುಟುಂಬಸ್ಥರಿಗೆ ಸಾಂತ್ವನ ಇಲ್ಲದ ವೇಳೆಯಲ್ಲಿ ಅವರನ್ನು ಮತ್ತಷ್ಟು ಕುಗ್ಗಿಸುವ ಕೆಲಸವನ್ನು ಮಾಡಲಾಗುತ್ತಿದೆ.
–ಸಿದ್ದಿಕ್ ನೆಲ್ಲಿಗುಡ್ಡೆ