ರಾಷ್ಟ್ರೀಯ ಶಿಕ್ಷಣ ನೀತಿ

nep

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಜಾರಿಗೆ ಕೇಂದ್ರ ಸರಕಾರ ಮುಂದಾಗಿದೆ. ಸಂಪುಟದಲ್ಲಿ ಈ ಕುರಿತ ಒಪ್ಪಿಗೆಯನ್ನು ಪಡೆದುಕೊಂಡಿದೆ. ನೂತನ ಶಿಕ್ಷಣ ನೀತಿಯ ಬಗ್ಗೆ ಗುಣಮಟ್ಟದ ಚರ್ಚೆಗಳು ನಡೆಯುವ ಮುನ್ನ ಆತುರದ ಅಂಗೀಕಾರ ನಡೆದಿದೆ.

ಎನ್ ಆರ್ ಸಿ, ಸಿಎಎ, ನೋಟ್ ಬ್ಯಾನ್, ಜಿಎಸ್ಟಿ ಸೇರಿದಂತೆ ಕೇಂದ್ರ ಸರಕಾರ ಜಾರಿಗೆ ತಂದ ಈವರೆಗಿನ ಎಲ್ಲಾ ಯೋಜನೆ, ನೀತಿಗಳು ಅವೈಜ್ಞಾನಿಕ ಮತ್ತು ದುರ್ಬಲ ವರ್ಗದವರ , ಶೋಷಿತರ ವಿರುದ್ಧವೇ ಇದೆ. ಅದರ ಪಟ್ಟಿಗೆ ಇದೀಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸೇರಿದೆ.

ಮಾದ್ಯಮವನ್ನು ಬಳಸಿ ಅತ್ಯಂತ ಪ್ರಗತಿಪರ ನೀತಿ ಎಂದು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಬಿಂಬಿಸಲಾಗಿದೆ. ಈ  ಕಾಯ್ದೆ ಬಗ್ಗೆ ಕೇಂದ್ರ ಸರಕಾರ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿದ್ದು, ವಾಣಿಜ್ಯೀಕರಣ, ಕೇಂದ್ರೀಕರಣ, ಶಿಕ್ಷಣದ ಕೋಮುವಾದವನ್ನು ಬಲಪಡಿಸಿದೆ.

1964ರಲ್ಲಿ ಭಾರತಕ್ಕೆ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು, ಅದರ ಸಂರಚನೆ ಹೇಗಿರಬೇಕೆಂದು ಅಂದಿನ ಯುಜಿಸಿ ಅಧ್ಯಕ್ಷರಾಗಿದ್ದ ಡಿ.ಎಸ್ ಕೊಥಾರಿಯವರ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಲಾಗಿತ್ತು. ಆ ಸಮಿತಿಯಲ್ಲಿ ಭಾರತದ ಎಲ್ಲಾ ರಾಜ್ಯದ ಪ್ರತಿನಿಧಿಗಳ ಜೊತೆಗೆ ವಿದೇಶದ ಶಿಕ್ಷಣ ತಜ್ಞರನ್ನು  ನೇಮಿಸಲಾಗಿತ್ತು. ಸಮಿತಿಯು ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಬೇಕೆಂದು ವರದಿ ನೀಡಿದ್ದು, ಅದರಂತೆ 1968ರಲ್ಲಿ ಶಿಕ್ಷಣ ನೀತಿಯನ್ನು ಭಾರತ ರೂಪಿಸಿಕೊಂಡಿದೆ. ತದನಂತರ 1986ರಲ್ಲಿ ಹೊಸ ಶಿಕ್ಷಣ ನೀತಿಯನ್ನು ತರಲಾಯಿತು. ಆ ಬಳಿಕ 1992ರಲ್ಲಿ ಪರಿಷ್ಕರಣೆ ಮಾಡಲಾಯಿತು. 2017 ರಲ್ಲಿ ಭಾರತ ಸರ್ಕಾರವು ಕೆ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣಕ್ಕಾಗಿ ಕರಡು ಸಿದ್ಧತೆಗಾಗಿ ಹೊಸ ಸಮಿತಿಯನ್ನು ರೂಪಿಸಿತ್ತು. ಸಮಿತಿ ಮಾಡಿದ ಶಿಫಾರಸ್ಸಿನ ಆಧಾರದಲ್ಲಿ ಕೇಂದ್ರ ಸರಕಾರ ಎನ್ ಇಪಿ 2020ನ್ನು ಜಾರಿಗೆ ತಂದಿದೆ.

ಕಸ್ತೂರಿ ರಂಗನ್ ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡವರು. ಈಗಿರುವಾಗ ಅವರ ಶಿಕ್ಷಣ ಕ್ಷೇತ್ರದ ಬಗೆಗಿನ ಶಿಫಾರಸ್ಸಿನ ಸ್ವರೂಪ ಕೂಡ ಅಳೆಯುವಂತಾಗಿದೆ. ಶಿಫಾರಸ್ಸಿನಲ್ಲಿ ಶೈಕ್ಷಣಿಕ ಕ್ರೆಡಿಟ್‌ ಬ್ಯಾಂಕ್‌ ಸ್ಥಾಪನೆ, ಸುಲಭ ಎಂಟ್ರಿ, ಎಕ್ಸಿಟ್‌ಗೆ ಅವಕಾಶ, ಬಹು ವಿಷಯಗಳ ಶಿಕ್ಷಣಕ್ಕೆ ಆದ್ಯತೆ, ಎಂಫಿಲ್‌ಗೆ ತಿಲಾಂಜಲಿ, ಜಿಲ್ಲೆಗೊಂದು ಬಹುವಿಷಯ ಕಾಲೇಜು, ಆರ್ಟ್ಸ್, ಕಾಮರ್ಸ್‌, ಸೈನ್ಸ್‌ ಎಂಬ ಗೋಡೆ ಇಲ್ಲ ಈಗೆ ಕೆಲವೊಂದು ಅಂಶಗಳು ನೂತನ ನೀತಿಯಲ್ಲಿ ಉಲ್ಲೇಖಿತವಾಗಿದ್ದರೂ ಕೂಡ ಶಿಕ್ಷಣ ವ್ಯವಸ್ಥೆಯಲ್ಲಿನ ಮೂಲ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿಲ್ಲ.

 ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2 ಭಾಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಆದರೆ ಭಾರತದಲ್ಲಿ 22 ಪ್ರಮುಖ ಭಾಷೆಗಳಿವೆ. ಈ ಭಾಷೆಯ ಜನರಿಗೆ ಇಂದು ಈ ಶಿಕ್ಷಣ ನೀತಿಯ ಬಗ್ಗೆ ತಿಳುವಳಿಕೆ ಇಲ್ಲದಾಗಿದೆ. ಮತ್ತು ಈ ಶಿಕ್ಷಣ ನೀತಿಯ ಬಗ್ಗೆ ಸೀಮಿತ ಚರ್ಚೆ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕೂಡ ಜನರ ಮುಂದೆ ಇದನ್ನು ಚರ್ಚೆಗೆ ತಂದಿಲ್ಲ. ಶಿಕ್ಷಣದ ನೀತಿ ರೂಪಿಸುವಾಗ ಶಿಕ್ಷಣದ ಮೂಲ ವಾರಸುದಾರರಾದ ಶಿಕ್ಷಕರು, ಪೋಷಕರು, ಮಕ್ಕಳು, ಎಸ್‍ಡಿಎಂಸಿ ಸದಸ್ಯರು, ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದಿರುವುದು ನೀತಿಯ ಅವಾಸ್ತಕತೆಯನ್ನು ಸೂಚಿಸುತ್ತದೆ.

ಭಾರತದಲ್ಲಿ ಐ.ಸಿ.ಎಸ್ಸಿ, ಸಿ.ಬಿ.ಎಸ್ಸಿ, ಕೇಂದ್ರೀಯ ಶಾಲೆ, ನವೋದಯ ಶಾಲೆ, ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ತಾರತಮ್ಯಗಳಿದೆ. ಇವುಗಳ ಬಗ್ಗೆ ಈ ನೀತಿಯಲ್ಲಿ ಏಕೆ ಚರ್ಚಿಸುತ್ತಿಲ್ಲ ಎನ್ನವುದು ಗಮನಿಸಬೇಕಿದೆ.

ನೂತನ ನೀತಿಯ ಪ್ರಕಾರ ಪ್ರಾಥಮಿಕ ಹಂತವನ್ನು 5 ವರ್ಷದ ಫಸ್ಟ್ ಪೌಂಡೇಶನ್ ಸ್ಟೇಜ್, 2ನೇ ಹಂತದ 3 ವರ್ಷದ ಮಿಡಲ್ ಸ್ಟೇಜ್, 9,10,11,12 ಲಾಸ್ಟ್ ಸ್ಟೆಜ್ ಎಂಬ ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಫಸ್ಟ್ ಪೌಂಡೇಶನ್ ಸ್ಟೇಜ್ ನ ಮಾತೃ ಭಾಷೆಯಲ್ಲೇ ಕಲಿಕೆಯ ಕಡ್ಡಾಯವನ್ನು ಮಾಡಲಾಗಿದೆ. ಇದರಿಂದ ವಲಸೆ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗುತ್ತದೆ. ತಮಿಳು ಜನಾಂಗದ ವಿದ್ಯಾರ್ಥಿಯೋರ್ವ ಕರ್ನಾಟಕದ ಹಳ್ಳಿಗಳಲ್ಲಿದ್ದರೆ ಆ ವಿದ್ಯಾರ್ಥಿಯ ಮಾತೃ ಭಾಷೆ ತಮಿಳಿನಲ್ಲಿ ಶಿಕ್ಷಣ ನೀಡಲು ಸಾಧ್ಯವೇ?

ಭಾರತ ಒಂದು ಒಕ್ಕೂಟ ವ್ಯವಸ್ಥೆ ಇಲ್ಲಿ, ಇಲ್ಲಿ ಬಹುತ್ವನ್ನು ಸಂವಿಧಾನ ಹೇಳುತ್ತದೆ,  ರಾಜ್ಯಗಳಿಗೂ ತಮ್ಮದೇ ಆದಂತಹ ಅಧಿಕಾರಗಳಿರುತ್ತದೆ. ಆದರೆ ಇವೆಲ್ಲವನ್ನೂ ಕಡೆಗಣಿಸಿ ರಾಷ್ಟ್ರೀಯ ಶಿಕ್ಷಣ ಆಯೋಗದ ಮೂಲಕ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ರಾಜ್ಯಗಳ ಜೊತೆ ಸಮಾಲೋಚನೆ ನಡೆಸದೆ ಏಕಪಕ್ಷೀಯ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ.

ನೂತನ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಭಾಷೆಯನ್ನು ದಕ್ಷಿಣದ ರಾಜ್ಯಗಳ ಮೇಲೆ ಹೇರುವ ಬಲವಂತದ ಪ್ರಯತ್ನವಾಗಿದೆ. ಶಿಕ್ಷಣದ ಖಾಸಗೀಕರಣಕ್ಕೆ ನೀತಿಯು ಪೂರಕವಾಗಿದೆ, ಖಾಸಗಿ ಶಾಲಾ-ಕಾಲೇಜುಗಳ ಸುಲಿಗೆಗೆ ನೂತನ ನೀತಿಯು ಮತ್ತಷ್ಟು ಬಲವನ್ನು ನೀಡಿದೆ. ಬಡ, ರೈತಾಪಿ, ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ದುಬಾರಿಯಾಗಲಿದೆ. ಶೋಷಿತ ಸಮುದಾಯಗಳು ಉನ್ನತ ಶಿಕ್ಷಣಗಳಿಂದ ವಂಚಿತರಾಗುವ ಸಾಧ್ಯತೆ ಹೇರಳವಾಗಿದೆ. ಈ ಮೂಲಕ ಶಿಕ್ಷಣವನ್ನು ಬಲಾಡ್ಯರು ಮತ್ತು ಮೇಲ್ವರ್ಗದವರಿಗೆ ಮೀಸಲು ಮಾಡುವ ಹಿಂಬಾಗಿಲ ತಂತ್ರ  ಹೊಸ ನೀತಿಯಾಗಿದೆ. ಇಲ್ಲದಿದ್ದರೆ ಸರಕಾರ ಯಾಕೆ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಉನ್ನತೀಕರಿಸಿ ಎಲ್ಲರಿಗೂ ಯಾಕೆ ಉಚಿತ , ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ? ಈ ಹೊಸ ನೀತಿಗಳ ಮೂಲಕ ಬಡ, ಕೆಲವರ್ಗದವರನ್ನು ಶಿಕ್ಷಣದಿಂದ ವಂಚಿಸುವ ತಂತ್ರವಲ್ಲವೇ? ಶಿಕ್ಷಣ ವಂಚಿತರಿಗೆ ಉದ್ಯೋಗ ಸಿಗುವುದಿಲ್ಲ, ಉದ್ಯೋಗ ಸಿಗದಿದ್ದರೆ ಆರ್ಥಿಕವಾಗಿ ದುರ್ಬಳರಾಗುತ್ತಾರೆ. ಆರ್ಥಿಕವಾಗಿ ದುರ್ಬಳರಾದರೆ ರಾಜಕೀಯವಾಗಿಯು ಅವರು ಹಿಂದುಳಿಯುತ್ತಾರೆ. ಈ ಮೂಲಕ ಒಟ್ಟಾರೆ ಕೆಲವರ್ಗದ ಸಮುದಾಯವನ್ನು ಮತ್ತಷ್ಟು ದುರ್ಬಲಗೊಳಿಸುವ ತಂತ್ರವೇ? ನೂತನ ನೀತಿ ಖಾಸಗೀಕರಣವನ್ನು ಇನ್ನಷ್ಟು ಬೆಳೆಸುವ ನೀಲಿ ನಕ್ಷೆಯಂತಿದ್ದು   ದೇಶದ ಜನಸಂಖ್ಯೆಯ ಬಹುದೊಡ್ಡ ಭಾಗವಾಗಿರುವ ಬಡವರಿಂದ ಶಿಕ್ಷಣವನ್ನು ಬಹುದೂರ ಕೊಂಡೊಯ್ಯುವ ತಂತ್ರವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ವೇಳೆ 10+2 ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡಿದ್ದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತಲ್ಲ? ಶಿಕ್ಷಕರ, ಪೋಷಕರ ಅಹವಾಲುಗಳನ್ನು ಯಾಕೆ ಸ್ವೀಕರಿಸಿಲ್ಲ? ಈಗಾಗಲೇ ಇರುವ ಶಿಕ್ಷಣ ನೀತಿಯನ್ನು ಬಲಪಡಿಸುವ ಮತ್ತು, ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಬದಲು  ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಪೂರಕವಾಗಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಹೊರಟಿದೆ. ಕೇಂದ್ರದ ಈ ಹೊಸ ಶಿಕ್ಷಣ ನೀತಿ ಸಾರ್ವತ್ರಿಕ ಶಿಕ್ಷಣ ನೀತಿಗೆ ವಿರುದ್ಧವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಅಸಮಾನತೆ ಸೃಷ್ಟಿಸಲು ಕೇಂದ್ರ ಹೊರಟಿದೆ.

ಕೊಠಾರಿ ಆಯೋಗದ ಪ್ರಕಾರ ದೇಶದ ಒಟ್ಟು ಜಿಡಿಪಿಯಲ್ಲಿ ಶೇ. 6ರಷ್ಟು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಯಾವ ಸರಕಾರ ಕೂಡ ಈ ಕೆಲಸವನ್ನು ಮಾಡಿಲ್ಲ. ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಗಬೇಕಾದ ಆದ್ಯತೆ, ಹಣಕಾಸು ಬೆಂಬಲ ಸಿಗದೇ ಉಳ್ಳವರಿಗೆ ಮಾತ್ರ ಶಿಕ್ಷಣ ಎನ್ನುವಂತಾಗಿದೆ. ಇದೀಗ ಹೊಸ ಶಿಕ್ಷಣ ನೀತಿಯ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಪೋಷಿಸಲು ಕೇಂದ್ರ ಸರ್ಕಾರ ಹೊರಟಿದೆ.

ಪ್ರೌಢ ಶಿಕ್ಷಣವನ್ನು ಒಳಗೊಂಡು ಪದವಿ ಮತ್ತು ಉನ್ನತ ಶಿಕ್ಷಣಕ್ಕೆ ಗಣನೀಯ ಪ್ರಮಾಣದಲ್ಲಿ ದಾಖಲಾತಿ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಕ್ಷೀಣವಾಗಿದೆ ಖಾಸಗೀ ಕರಣದಿಂದ ಏರುತ್ತಿರುವ ಶುಲ್ಕ ಹೀಗೆ ಅನೇಕ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಹೊಸ ಶಿಕ್ಷಣ ನೀತಿ ಉಪಾಯ ಸೂಚಿಸಿಲ್ಲ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸದ ಈ ಶಿಕ್ಷಣ ನೀತಿ ಸಮರ್ಪಕವಾಗಲು ಹೇಗೆ ಸಾಧ್ಯ?

-ಅಭಿಷೇಕ್ ಮೌರ್ಯ

nep

ರಾಷ್ಟ್ರೀಯ ಶಿಕ್ಷಣ ನೀತಿ

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಜಾರಿಗೆ ಕೇಂದ್ರ ಸರಕಾರ ಮುಂದಾಗಿದೆ. ಸಂಪುಟದಲ್ಲಿ ಈ ಕುರಿತ ಒಪ್ಪಿಗೆಯನ್ನು ಪಡೆದುಕೊಂಡಿದೆ. ನೂತನ ಶಿಕ್ಷಣ

Read More »
hunger

ಹಸಿವಿನಿಂದ ಸತ್ತವರು…

ಜಾಗತಿಕ ಹಸಿವು ಸೂಚ್ಯಂಕ ವರದಿ  “ನಮ್ಮ” ಹಸಿವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ವಿಶ್ವದ ಮುಂದೆ ಭಾರತದ ಹಸಿವಿನ ಪುಟವನ್ನು ತೆರೆದಿಟ್ಟ

Read More »