17 ವರ್ಷದ ಬಾಲಕ ಅರ್ಕಾನ್ ಅಲಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್: ಐವರು ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚನೆ

17 ವರ್ಷದ ಬಾಲಕ ಅರ್ಕಾನ್ ಅಲಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್:ಐವರು ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚನೆ

ಉತ್ತರಪ್ರದೇಶದ ಬರೇಲಿಯಲ್ಲಿ ನಡೆದ ಅರ್ಕಾನ್ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಟ್ವಿಸ್ಟ್ ಸಿಕ್ಕಿದ್ದು, ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಐವರು ಪೊಲೀಸರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ.

17ರ ಹರೆಯದ ಅರ್ಕನ್ ಅಲಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬರೇಲಿ ಪೊಲೀಸರು ಹೇಳಿಕೊಂಡಿದ್ದರು.

ಆದರೆ ಇದೀಗ ಪ್ರಕರಣ ನಡೆದು ನಾಲ್ಕು ತಿಂಗಳ ಬಳಿಕ ಆರೋಪಿ ಅಧಿಕಾರಿಗಳ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಆ.17ರಂದು ಬರೇಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ತಂದೆ ಪಪ್ಪು ಖುರೇಷಿ ಅವರ ದೂರಿನ ಮೇರೆಗೆ ಬಿತ್ರಿ ಚೈನ್‌ಪುರ ಠಾಣಾಧಿಕಾರಿ ಅಶ್ವಿನಿ ಕುಮಾರ್ ಚೌಬೆ, ಸಬ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಕುಮಾರ್, ಕಾನ್‌ಸ್ಟೆಬಲ್‌ಗಳಾದ ರಾಜೇಶ್ ಮತ್ತು ವಿಪಿನ್ ಕಂಡ್ವಾಲ್ ಮತ್ತು ಹೋಮ್ ಗಾರ್ಡ್ ವೀರಪಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಮೇಲೆ ನರಹತ್ಯೆ, ಸುಲಿಗೆ, ದರೋಡೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆತನಿಂದ 30,400 ರೂಪಾಯಿ ದೋಚಿದ್ದಾರೆ ಎಂದು ಪಪ್ಪು ಖುರೇಷಿ ಆರೋಪಿಸಿದ್ದಾರೆ.

ಎಪ್ರಿಲ್ 17 ರಂದು ಅರ್ಕಾನ್ ಅವರು ಎಮ್ಮೆ ಸಾಗಿಸಿದ ಹಣವನ್ನು ಸಂಗ್ರಹಿಸಲು ಮಾರಿಯಾ ಫ್ರೋಜನ್ ಮಾಂಸದ ಕಾರ್ಖಾನೆಗೆ ಹೋಗಿದ್ದರು.ಮಗ ಬಹಳ ಸಮಯವಾದರೂ ಬರಲಿಲ್ಲ ಎಂದು ಅರ್ಕಾನ್ ತಂದೆ ಖುರೇಷಿ 11.30ಕ್ಕೆ ಮಗನಿಗೆ ಕರೆ ಮಾಡಿದ್ದರು.ಈ ವೇಳೆ ಹಣ ತೆಗೆದುಕೊಂಡಿದ್ದು ಬರುತ್ತಿರುವುದಾಗಿ ಹೇಳಿದ್ದಾನೆ.

ಬಳಿಕ 11:45 ಕ್ಕೆ ನನಗೆ ಮಗನ ಫೋನ್ ನಿಂದ ಕರೆ ಬಂದಿದೆ. ಆಗ ತನ್ನನ್ನು ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿ 50,000 ರೂಪಾಯಿಯೊಂದಿಗೆ ಬೇಗ ಸ್ಥಳಕ್ಕೆ ತಲುಪುವಂತೆ ಖುರೇಷಿಗೆ ಕೇಳಿಕೊಂಡಿದ್ದಾನೆ ಇಲ್ಲವಾದರೆ ಮಗನ ಮೇಲೆ ಗೋಹತ್ಯೆಯ ಆರೋಪದ ಮೇಲೆ ದಾಖಲಿಸಲಾಗುವುದು ಎಂದು ಬೆದರಿಸಿದ್ದರು ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ.

ಇದರಿಂದ ಭಯಗೊಂಡ ಖುರೇಷಿ ಇತರ ಸ್ಥಳೀಯರನ್ನು ಕರೆಸಿ, ಬರೇಲಿಯ ಕಂಟೋನ್ಮೆಂಟ್ ಪ್ರದೇಶದ ಬಿಲಾಲ್ ಮಸೀದಿ ಪ್ರದೇಶಕ್ಕೆ ಧಾವಿಸಿದರು. ಪೊಲೀಸ್ ಇನ್ಸ್‌ಪೆಕ್ಟರ್, ಕಾನ್‌ಸ್ಟೆಬಲ್‌ಗಳು ಮತ್ತು ಹೋಮ್ ಗಾರ್ಡ್ ತನ್ನ ಮಗನನ್ನು ಅಮಾನುಷವಾಗಿ ಥಳಿಸುವುದನ್ನು ನಾನು ನೋಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ.ಬಳಿಕ ಬಂದ ಎಸ್ ಎಚ್ ಒ ಮಾತನಾಡಿದರೆ ಶೂಟ್ ಮಾಡುವ ಬೆದರಿಕೆ ಹಾಕಿದ್ದ ಎಂದು ಎಫ್ಐ ಆರ್ ಉಲ್ಲೇಖಿಸಿ ‘ದಿ ವೈರ್’ ವರದಿ ಮಾಡಿದೆ.

ಟಾಪ್ ನ್ಯೂಸ್