ಹಾಸನ; ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ನೀಡುತ್ತಿದ್ದ ಪೊಲೀಸ್ ವಾಹನ ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಮಾನವೀಯತೆ ಇಲ್ಲದೇ ಸಾವಿನ ದೃಶ್ಯವನ್ನು ಕಂಡೂ ಕಾಣದಂತೆ ಸಚಿವ ಅರಗ ಜ್ಞಾನೇಂದ್ರ ಕಾರು ನಿಲ್ಲಿಸದೆ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಹಾಸನ ಜಿಲ್ಲೆಯ ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಅಪಘಾತದಲ್ಲಿ ಮೃತ ದುರ್ದೈವಿ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ತೆರಳಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಹಾಸನ ಜಿಲ್ಲೆಯ ಮಾರ್ಗವಾಗಿ ಶಿವಮೊಗ್ಗದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಎಸ್ಕಾರ್ಟ್ ಪಡೆದುಕೊಂಡಿದ್ದರು. ಈ ವೇಳೆ ಬೈಕ್ ಸವಾರನಿಗೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.
ಹಾಸನ ಪೊಲೀಸರ ಪ್ರಕಾರ,ಗೃಹ ಸಚಿವರ ಬೆಂಗಾವಲು ವಾಹನವೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ನಿಧನಕ್ಕೆ ಕಾರಣವಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದೆ.ಗೃಹ ಸಚಿವರು ಪ್ರವಾಸದ ವೇಳೆಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹಾಸನ ಜಿಲ್ಲಾ ಪೊಲೀಸ್ ವಾಹನವೊಂದು ಬೆಂಗಾವಲು ವಾಹನ ಹಿಂಬಾಲಿಸುವಾಗ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ.ಇದು ಗೃಹಸಚಿವರ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.