ಶಿವಮೊಗ್ಗ;ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಈಶ್ವರಪ್ಪ ಹಾಗೂ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಸಮಾವೇಶ ನಡೆಸಲಾಯಿತು.ಈ ವೇಳೆ ತಮಿಳು ನಾಡಗೀತೆ ಹಾಕಲಾಗಿದೆ.
ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರವಾಗಿದ್ದಕ್ಕೆ ಟೀಕಿಸಿರುವ ವಿಪಕ್ಷ ಕಾಂಗ್ರೆಸ್, ಅಣ್ಣಾಮಲೈಗೆ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ ಎಂದು ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧದ ನಿಲುವು ಹೊಂದಿದ್ದ ಅಣ್ಣಾಮಲೈ ಅವರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಬಿಜೆಪಿ ಕನ್ನಡಿಗರ ಸ್ವಾಭಿಮಾನವನ್ನು ಅಣಕವಾಡಿದೆ. ಈಗ ಅಣ್ಣಾಮಲೈ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ. ಬಿಜೆಪಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.
ಕಾರ್ಯಕ್ರಮ ಆರಂಭಕ್ಕೂ ಮುನ್ನಾ ಆಯೋಜಕರು ಈಗ ನಾಡಗೀತೆ ಪ್ರಸಾರವಾಗಲಿದೆ ಎಂಬುದಾಗಿ ಹೇಳಿದರು. ಇದರಿಂದಾಗಿ ವೇದಿಕೆಯ ಮೇಲೆದಿದ್ದಂತ ಕೆ.ಎಸ್ ಈಶ್ವರಪ್ಪ ಆದಿಯಾಗಿ ಎಲ್ಲರೂ ಎದ್ದು ನಿಂತರು. ಈ ವೇಳೆ ತಮಿಳುನಾಡಿನ ನಾಡಗೀತೆಯನ್ನು ಪ್ರಸಾರ ಮಾಡಲಾಗಿದೆ.
ತಮಿಳು ನಾಡಗೀತೆ ಪ್ರಸಾರವಾಗುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಆದರೆ ತಮಿಳು ನಾಡಗೀತೆ ಅರ್ಧ ಪ್ರಸಾರವಾಗುವಾಗ ಈಶ್ವರಪ್ಪ ಎಚ್ಚೆತ್ತುಕೊಂಡಿದ್ದಾರೆ. ತಮಿಳು ನಾಡಗೀತೆಯನ್ನು ನಿಲ್ಲಿಸಿದ್ದಾರೆ. ಕೂಡಲೇ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಿದ್ದು, ಎಲ್ಲರಿಂದ ಕನ್ನಡ ನಾಡಗೀತೆಯನ್ನು ಹಾಡಿಸಿದ್ದಾರೆ.