ಯುವಕನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಮೂತ್ರ ವಿಸರ್ಜನೆ

ಯುವಕನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ 6 ಆರೋಪಿಗಳನ್ನು ಬಂಧಿಸಿದ್ದಾರೆ.

ಯುವಕನನ್ನು 6 ಮಂದಿ ಆರೋಪಿಗಳು 4 ಗಂಟೆಗಳ ಕಾಲ ಥಳಿಸಿದ್ದು, ನೀರು ಕೇಳಿದಾಗ ಆರೋಪಿಗಳು ಆತನ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಎಸ್‌ಸಿ ಸೆಲ್ ಘಟನೆಯನ್ನು ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ಮಾಡಿದೆ. ಟಿಡಿಪಿ ಎಸ್ಸಿ ಸೆಲ್ ಅಧ್ಯಕ್ಷ ಎಂಎಂಎಸ್ ರಾಜು ನೇತೃತ್ವದಲ್ಲಿ ಕಂಚಿಕಚಾರ್ಲ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.

ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿಡಿಪಿ ಎಸ್‌ಸಿ ಸೆಲ್ ಅಧ್ಯಕ್ಷ ಎಂಎಂಎಸ್ ರಾಜು, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ದಲಿತರ ಮೇಲಿನ ಹಲ್ಲೆಗಳು ಹೆಚ್ಚಿವೆ. ರಾಜ್ಯದಲ್ಲಿ ದಲಿತರ ಮೇಲೆ ದಾಳಿಗಳು ನಡೆಯುತ್ತಿವೆ. ಶ್ಯಾಮ್ ಕುಮಾರ್ ಎಂಬ ಬಾಲಕನ ಮೇಲೆ ಆಡಳಿತ ಪಕ್ಷದ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅವರಿಗೆ ಸ್ಟೇಷನ್ ಜಾಮೀನು ನೀಡಲಾಯಿತು. ದಲಿತ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ನಂತರವೂ ಅವರು ಭಯವಿಲ್ಲದೆ ಹೊರಗೆ ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶ್ಯಾಮ್ ಅವರ ದವಡೆಗೆ ಆಪರೇಷನ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದು, ಅದಕ್ಕೆ ಮೂರು ದಿನ ಬೇಕು ಎಂದು ಎಂಎಂಎಸ್ ರಾಜು ಹೇಳಿದ್ದು, ದಲಿತರ ಮೇಲಿನ ಹಲ್ಲೆ ಖಂಡನಾರ್ಹವಾಗಿದೆ. ಈ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್