ಗಾಝಾದ ಮೇಲೆ ದಾಳಿಗೆ ಇಸ್ರೇಲ್ ಗೆ ಬೆಂಬಲ; ಅಮೆರಿಕದಲ್ಲಿ ಭುಗಿಲೆದ್ದ ಆಂತರಿಕ ಅಸಮಾಧಾನ

ಗಾಝಾ ಮೇಲೆ ದಾಳಿ ನಡೆಸಲು ಇಸ್ರೇಲ್‌ಗೆ ಜೋ ಬೈಡನ್‌ ಬೆಂಬಲ ನಿಲುವನ್ನು ವಿರೋಧಿಸಿ 500ಕ್ಕೂ ಅಧಿಕ ಅಧಿಕಾರಿಗಳು ಸಹಿಯನ್ನು ಮಾಡಿ ಪತ್ರವೊಂದನ್ನು ಕಳುಹಿಸಿದ್ದಾರೆ.

ಯುಎಸ್‌ನ ಸುಮಾರು 40 ಸರ್ಕಾರಿ ಕಚೇರಿಯ 500ಕ್ಕೂ ಅಧಿಕ ಸಿಬ್ಬಂದಿಗಳು ಮಂಗಳವಾರ ಯುಎಸ್ ಅಧ್ಯಕ್ಷ ಜೋ ಬೈಡನ್‌ಗೆ ಮತ್ತು ಕ್ಯಾಬಿನೆಟ್‌ಗೆ ಬರೆದ ಪತ್ರದಲ್ಲಿ ಗಾಝಾ ಪಟ್ಟಿಯ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದೆ ಮತ್ತು ಗಾಝಾ ಪಟ್ಟಿಗೆ ಮಾನವೀಯ ಸಹಾಯವನ್ನು ಅನುಮತಿಸುವಂತೆ ಸೂಚಿಸಲು ಆಗ್ರಹಿಸಿದೆ.

ಪತ್ರದಲ್ಲಿ ಅ.7ರಂದು 1,200 ಇಸ್ರೇಲ್‌ ನಾಗರಿಕರನ್ನು ಕೊಂದ ಹಮಾಸ್ ದಾಳಿಯನ್ನು ಕೂಡ ಖಂಡಿಸಲಾಗಿದೆ. ಗಾಝಾದ ಮೇಲೆ ಇಸ್ರೇಲ್‌ ಯುದ್ಧ ಘೋಷಿಸಿತ್ತು. ಇದಕ್ಕೆ ಅಮೆರಿಕ ಬೆಂಬಲವನ್ನು ಸೂಚಿಸಿತ್ತು. ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಕೂಡ ರವಾನಿಸಿತ್ತು. ಈಗ ಗಾಝಾದಲ್ಲಿ 11,200ಕ್ಕೂ ಹೆಚ್ಚು ಜನರನ್ನು ಇಸ್ರೇಲ್‌ ಮಿಲಿಟರಿ ಹತ್ಯೆ ಮಾಡಿದೆ.

ನಾವು ತುರ್ತು ಕದನ ವಿರಾಮಕ್ಕೆ ಒತ್ತಡ ಹೇರುವಂತೆ ಅಧ್ಯಕ್ಷ ಬಿಡೆನ್ ಅವರಲ್ಲಿ ಕೇಳುತ್ತಿದ್ದೇವೆ. ಇಸ್ರೇಲ್‌ನ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆಗೆ ಕರೆ ನೀಡಬೇಕು. ನೀರು, ಇಂಧನ, ವಿದ್ಯುತ್ ಮತ್ತು ಇತರ ಮೂಲಭೂತ ಸೇವೆಗಳ ಮರುಸ್ಥಾಪನೆ ಮಾಡಬೇಕು. ಗಾಝಾ ಪಟ್ಟಿಗೆ ಮಾನವೀಯ ನೆರವಿಗೆ ಅವಕಾಶ ಮಾಡುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ಪತ್ರವನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪತ್ರವು ಇಸ್ರೇಲ್‌ ಬಗೆಗಿನ ಬೈಡನ್‌ ನಿಲುವಿಗೆ ಹೆಚ್ಚುತ್ತಿರುವ ಆಂತರಿಕ ಅಸಮಾಧಾನವನ್ನು ಬಹಿರಂಗಪಡಿಸುತ್ತದೆ. ಈ ಮೊದಲು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ಗೆ 3 ಆಂತರಿಕ ಮೆಮೊಗಳು ಕಳುಹಿಸಲಾಗಿತ್ತು ಮತ್ತು US ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್‌ನ 1,000ಕ್ಕೂ ಹೆಚ್ಚು ಉದ್ಯೋಗಿಗಳು ಸಹಿ ಮಾಡಿ ಮುಕ್ತ ಪತ್ರ ಬರೆದಿದ್ದರು.

ಪತ್ರಕ್ಕೆ ಸಹಿ ಮಾಡಿದವರು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ತಮ್ಮ ಗುರತನ್ನು ಗೌಪ್ಯವಾಗಿಟ್ಟುಕೊಂಡಿದ್ದಾರೆ. ಸಹಿ ಮಾಡಿದವರಲ್ಲಿ ಹೆಚ್ಚಿನವರು ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಅಗಾಧ ಪ್ರಮಾಣದ ಅಮೆರಿಕನ್ನರು ಕದನ ವಿರಾಮವನ್ನು ಬೆಂಬಲಿಸುತ್ತಾರೆ. 66 ಪ್ರತಿಶತ ಅಮೆರಿಕನ್ನರು ಕದನ ವಿರಾಮಕ್ಕಾಗಿ ಇಸ್ರೇಲ್ ಮೇಲೆ ಒತ್ತಡ ಹೇರಬೇಕು ಎಂದು ಬೈಡನ್‌ಗೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್