ಇಸ್ರೇಲ್ ದಾಳಿಯಲ್ಲಿ ಪತ್ನಿ ಮಕ್ಕಳನ್ನು ಕಳೆದುಕೊಂಡ ಅಲ್ ಜಝೀರಾ ಪತ್ರಕರ್ತ

ಗಾಝಾ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ಅಲ್ ಜಝೀರಾ ಅರೇಬಿಕ್ ಬ್ಯೂರೋ ಮುಖ್ಯಸ್ಥರ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ದಿದ್ದಾರೆ.

ಗಾಝಾದಲ್ಲಿರುವ ಅಲ್ ಜಝೀರಾ ಅರೇಬಿಕ್ ಬ್ಯೂರೋ ಮುಖ್ಯಸ್ಥ ವೇಲ್ ದಹದೌಹ್ ಅವರ ಪತ್ನಿ, ಮಗ, ಮಗಳು ಮತ್ತು ಮೊಮ್ಮಗ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಅಲ್ ಜಝೀರಾದಲ್ಲಿ ಪ್ರಸಾರವಾದ ವಿಡಿಯೋದಲ್ಲಿ ದಹದೌಹ್ ಅವರು ಬುಧವಾರ ಡೇರ್ ಎಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ತನ್ನ ಮೃತ ಪತ್ನಿ, ಮಗ ಮತ್ತು ಮಗಳನ್ನು ನೋಡಲು ಪ್ರವೇಶಿಸುತ್ತಿರುವುದನ್ನು ತೋರಿಸಿದೆ.

15 ವರ್ಷದ ಮಗ ಮಹಮೂದ್‌ನ ಮುಖವನ್ನು ತೋರಿಸಲಾಗಿದೆ. ಅವನು ತನ್ನ ತಂದೆಯಂತೆ ಪತ್ರಕರ್ತನಾಗಲು ಬಯಸಿದ್ದ ಎಂದು ಹೇಳಲಾಗಿದೆ. ನಂತರ ವಿಡಿಯೋದಲ್ಲಿ ಅವರ 7 ವರ್ಷದ ಮಗಳು ಶ್ಯಾಮ್‌ ಅವರ ರಕ್ತಸಿಕ್ತ ದೇಹವನ್ನು ಅವರು ಹಿಡಿದು ಕಣ್ಣೀರಿಡುವುದು ಕಂಡು ಬಂದಿದೆ.

ಆಘಾತಕ್ಕೊಳಗಾದ ದಹದೌಹ್ ಅವರಲ್ಲಿ ಆಸ್ಪತ್ರೆಯಿಂದ ಹೊರಡುವಾಗ ಅಲ್ ಜಝೀರಾ ಮಾದ್ಯಮ ಮಾತನಾಡಿಸಿದೆ. ಏನಾಯಿತು ಎಂಬುದು ಸ್ಪಷ್ಟವಾಗಿದೆ. ಇದು ಮಕ್ಕಳು, ಮಹಿಳೆಯರು ಮತ್ತು ನಾಗರಿಕರ ಮೇಲೆ ಉದ್ದೇಶಿತ ದಾಳಿಗಳ ಸರಣಿಯಾಗಿದೆ. ಅಂತಹ ದಾಳಿಯ ಬಗ್ಗೆ ನಾನು ಯಾರ್ಮೌಕ್‌ನಿಂದ ವರದಿ ಮಾಡುತ್ತಿದ್ದೆ ಮತ್ತು ಇಸ್ರೇಲಿ ದಾಳಿಗಳು ನುಸಿರಾತ್ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿದ್ದಾರೆ.

ದಹದೌಹ್ ಅವರ ಮೊಮ್ಮಗ ಆಡಮ್ ದಾಳಿ ನಡೆದ ಎರಡು ಗಂಟೆಗಳ ನಂತರ ಮೃತಪಟ್ಟಿದ್ದಾರೆ. ಅಂಬೆಗಾಲಿಡುವ ಮೊಮ್ಮಗಳು ಸೇರಿದಂತೆ ದಹದೌಹ್ ಅವರ ಕುಟುಂಬದ ಕೆಲವು ಸದಸ್ಯರು ಗಾಝಾದ ದಕ್ಷಿಣದಲ್ಲಿರುವ ನುಸಿರಾತ್ ನಿರಾಶ್ರಿತರ ಶಿಬಿರದಲ್ಲಿ ಅವರು ವಾಸಿಸುತ್ತಿದ್ದ ಮನೆಯ ಮೇಲಿನ ದಾಳಿಯ ವೇಳೆ ಅದೃಷ್ಟಾವಶಾತ್ ಬದುಕುಳಿದಿದ್ದಾರೆ.

ಇಸ್ರೇಲ್ ಆಕ್ರಮಣ ಪಡೆಗಳ ವಿವೇಚನಾರಹಿತ ದಾಳಿಯು ಪತ್ರಕರ್ತರ ಪತ್ನಿ, ಮಗ ಮತ್ತು ಮಗಳ ದುರಂತ ಸಾವಿಗೆ ಕಾರಣವಾಯಿತು ಎಂದು ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್ ಹೇಳಿಕೆಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್