ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಝ್ ಆರೋಪ; ಶಿಕ್ಷಕರಿಗೆ ಥಳಿತ
ಅಹಮದಾಬಾದ್; ಖಾಸಗಿ ಶಾಲೆಯೊಂದರ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಹೇಳಿದ್ದಾರೆ ಎಂದು ಆರೋಪಿಸಿ, ಸಂಘ ಪರಿವಾರದ ಕಾರ್ಯಕರ್ತರ ಪ್ರತಿಭಟನೆ ನಡೆಸಿ ಶಿಕ್ಷಕರನ್ನು ಥಳಿಸಿದ ಘಟನೆ ನಡೆದಿದೆ.
ಸಂಘಪರಿವಾರದ ಕಾರ್ಯಕರ್ತರು ಶಿಕ್ಷಕರನ್ನು ಥಳಿಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆಯಾಗಿದೆ.
ಸೆ.29 ರಂದು ಅಹಮದಾಬಾದ್‌ನ ಘಟ್ಲೋಡಿಯಾ ಪ್ರದೇಶದ ಕಲೋರೆಕ್ಸ್ ಫ್ಯೂಚರ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಘಟನೆಯ ಕುರಿತು ಕ್ಷಮೆಯಾಚಿಸಿರುವ ಶಾಲೆಯ ಆಡಳಿತ ಮಂಡಳಿ, ಈ ಕಾರ್ಯಕ್ರಮವು ವಿವಿಧ ಧರ್ಮಗಳ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಯಾವುದೇ ವಿದ್ಯಾರ್ಥಿಯನ್ನು ನಮಾಝ್ ಮಾಡಲು ಒತ್ತಾಯಿಸಿಲ್ಲ, ಎಂದು ಸ್ಪಷ್ಟೀಕರಣ ನೀಡಿದೆ.
ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ನೀರಲಿ ದಗಲಿ ಮಾತನಾಡಿ, ಹಬ್ಬ ಹರಿದಿನಗಳಿಗೆ ಮುನ್ನ ವಿದ್ಯಾರ್ಥಿಗಳಿಗೆ ವಿವಿಧ ಧರ್ಮ, ಆಚರಣೆಗಳ ಬಗ್ಗೆ ಅರಿವು ಮೂಡಿಸುವುದು ಶಾಲೆಯ ಸಂಪ್ರದಾಯವಾಗಿದೆ” ಎಂದು ಹೇಳಿದ್ದಾರೆ.
ಈದ್ ಹಿನ್ನೆಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಹಬ್ಬದ ಬಗ್ಗೆ ಬೋಧಿಸಲು ಈ ಚಟುವಟಿಕೆಯನ್ನು ಹಮ್ಮಿಕೊಂಡಿದ್ದೆವು. ಸಂವತ್ಸರಿ, ಗಣೇಶ ಚತುರ್ಥಿ ಸೇರಿದಂತೆ ಎಲ್ಲ ಧರ್ಮಗಳ ಹಬ್ಬಗಳಿಗೂ ಮುನ್ನ ಇಂತಹ ಚಟುವಟಿಕೆಗಳನ್ನು ನಡೆಸುತ್ತೇವೆ. ಯಾವ ವಿದ್ಯಾರ್ಥಿಯೂ ನಮಾಜ್ ಮಾಡುವಂತೆ ಒತ್ತಾಯಿಸಿಲ್ಲ. ಕೇವಲ ಎರಡು ನಿಮಿಷಗಳ ಚಟುವಟಿಕೆಯಾಗಿತ್ತು ಮತ್ತು ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪಡೆದಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.