ಬೆಂಗಳೂರು; ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಚೈತ್ರಾ ಕುಂದಾಪುರ ತಂಡದ ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ.
50 ಲಕ್ಷರೂ.ಹಣವನ್ನು ತೆಗೆದುಕೊಂಡು ಸ್ವಾಮೀಜಿ ಒಡಿಶಾದ ಕಟಕ್‌ಗೆ ಪರಾರಿಯಾಗಿದ್ದು, ಅಲ್ಲಿಂದ ಕಾಶಿಗೆ ಹೋಗುವಾಗ ಸಿಕ್ಕಿಬಿದ್ದಿದ್ದಾನೆ.
ಹಿರೇಹಡಗಲಿಯ ಹಾಲಶ್ರೀ ಮಠದಿಂದ ರಾತ್ರಿ 11 ಗಂಟೆ ವೇಳೆಗೆ ಮೈಸೂರಿಗೆ ತೆರಳಿದ್ದರು. ನಂತರ, ಸೆ.12ರಂದು ಮೈಸೂರಿನ ಹೆಚ್‌ಎಎಲ್ ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸವಾಗಿದ್ದರು.ಇದಾದ ನಂತರ ಸೆ.3ರಂದು ಬೆಳಗ್ಗೆ ಮೈಸೂರಿನಲ್ಲಿ 4 ಮೊಬೈಲ್ ಹಾಗೂ 4 ಸಿಮ್ ಖರೀದಿ ಮಾಡಿದ್ದಾರೆ.
ಅದೇ ದಿನ ಮಧ್ಯಾಹ್ನ ತಮ್ಮ ಕಾರಿನ ಚಾಲಕ ನಿಂಗರಾಜು ಅವರಿಂದ 50 ಲಕ್ಷ ರೂ.ಗಳನ್ನು ತಮ್ಮ ಖರ್ಚಿಗೆ ತರಿಸಿಕೊಳ್ಳುತ್ತಾರೆ.ಈ ಹಣವನ್ನು ಸ್ವಾಮೀಜಿಯ ಚಾಲಕ ನಿಂಗರಾಜು ತೆಗೆದುಕೊಂಡು ಬಂದಿದ್ದರು.
ಇದಾದ ಬಳಿಕ ಸ್ವಾಮೀಜಿ ತಮ್ಮ ಕಾರಿನ ನಂಬರ್ ಪ್ಲೇಟ್ ಅನ್ನು ತೆಗೆಸಿ ಪ್ರಣವ್ ಮನೆಯಲ್ಲಿ ಕಾರನ್ನು ನಿಲ್ಲಿಸಿ, ಅಲ್ಲಿಂದ ಬಸ್‌ನ ಮೂಲಕ ಸ್ವಾಮೀಜಿ ಪರಾರಿ ಆಗಿದ್ದಾರೆ.
ಮೈಸೂರಿನಿಂದ ಹೈದರಾಬಾದ್ ಗೆ ತೆರಳಿದ್ದರು. ಆದರೆ, ರಾಜ್ಯದಲ್ಲಿ ಸ್ವಾಮೀಜಿಯೊಂದಿಗೆ ಸಂಪರ್ಕ ಹೊಂದಿದ್ದ ನಿಂಗರಾಜು ಬಂಧನವಾಗ್ತಿದ್ದಂತೆ ಅಭಿನವ ಸ್ವಾಮೀಜಿ ಶ್ರೀಶೈಲಕ್ಕೆ ಪರಾರಿಯಾಗಿದ್ದರು.
ಶ್ರೀಶೈಲದಲ್ಲಿರುವ ಮಾಹಿತಿ ಪೊಲೀಸರಿಗೆ ತಿಳಿದಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅಭಿನವ ಹಾಲಶ್ರೀ ಅಲ್ಲಿಂದ ಪೂರಿ- ಗಂಜಾಂ- ಕಟಕ್ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.
ಒಡಿಶಾ ರಾಜ್ಯದ ಕಟಕ್‌ನಲ್ಲಿ ಸ್ಥಳೀಯ ಪೊಲೀಸರ ನೆರವಿನ ಮೇರೆಗೆ ಸ್ವಾಮೀಜಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆಯುತ್ತಾರೆ. ಅಲ್ಲಿಗೆ ತೆರಳಿದ ಬೆಂಗಳೂರು ಸಿಸಿಬಿ ಪೊಲೀಸರು, ಕಟಕ್‌ನಿಂದ ಕಾಶಿಗೆ ಪ್ರಯಾಣ ಮಾಡುವ ವೇಳೆ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಸ್ವಾಮೀಜಿ ಪ್ರಯಾಣಿಸಿರುವುದು ಕಂಡು ಬಂದಿದೆ.