ನವದೆಹಲಿ;ಭಾರತ -ಪಾಕಿಸ್ತಾನ ವಿಭಜನೆಯ ವೇಳೆ ನಿಮ್ಮ ಕುಟುಂಬ ಯಾಕೆ ಪಾಕಿಸ್ತಾನಕ್ಕೆ ಹೋಗಿಲ್ಲ? ಎಂದು ಶಾಲಾ ಶಿಕ್ಷಕಿ ಪ್ರಶ್ನಿಸಿರುವುದಾಗಿ ಆರೋಪಿಸಿ ನಾಲ್ವರು ವಿದ್ಯಾರ್ಥಿಗಳ ಪೋಷಕರು ದೆಹಲಿಯ ಶಾಲಾ ಶಿಕ್ಷಕಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
9ನೇ ತರಗತಿ ವಿದ್ಯಾರ್ಥಿಗಳ ಕುಟುಂಬದವರು ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಗಾಂಧಿನಗರದ ಸರ್ಕಾರಿ ಸರ್ವೋದಯ ಬಾಲ ವಿದ್ಯಾಲಯದ ಶಿಕ್ಷಕಿ ಹೇಮಾ ಗುಲಾಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ವಿದ್ಯಾರ್ಥಿ ನೀಡಿದ ದೂರಿನ ಪ್ರಕಾರ, ಶಿಕ್ಷಕಿ ಹೇಮಾ ಗುಲಾಟಿ ಅವರು ಬುಧವಾರ ಕಾಬಾ ಬಗ್ಗೆ ಮತ್ತು ಕುರಾನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವಿಭಜನೆಯ ಸಮಯದಲ್ಲಿ ನೀವು ಪಾಕಿಸ್ತಾನಕ್ಕೆ ಹೋಗಲಿಲ್ಲ, ನೀವು ಭಾರತದಲ್ಲಿಯೇ ಇದ್ದೀರಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಕೊಡುಗೆ ಇಲ್ಲ ಎಂದು ಶಿಕ್ಷಕರು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿರುವ ಬಗ್ಗೆ ಎನ್ ಡಿಟಿವಿ ವರದಿ ಮಾಡಿದೆ.
ಇಂತಹ ಹೇಳಿಕೆಗಳು ಶಾಲೆಯಲ್ಲಿ ವೈಷಮ್ಯಕ್ಕೆ ಕಾರಣವಾಗುತ್ತವೆ ಮತ್ತು ಶಿಕ್ಷಕರನ್ನು ವಜಾಗೊಳಿಸಬೇಕೆಂದು ವಿದ್ಯಾರ್ಥಿಗಳ ಕುಟುಂಬಗಳು ಒತ್ತಾಯಿಸಿವೆ.